Tuesday 29 November 2011

ನಮ್ಮ ಪಾಲಿನ ಹಾಡು

ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್‌ರಂತಹ ಗಾಯಕ-ಸಂಗೀತಕಾರರಿಂದ ವಿಶೇಷ ಹರಿವು ಪಡೆದುಕೊಂಡ ಕನ್ನಡ ಸುಗಮ ಸಂಗೀತ ಕ್ಷೇತ್ರ ಈಗಲೂ ಅಂಥಾ ಸುಗಮವೇನೂ ಅಲ್ಲ. ಲಹರಿಯಂಥ ಒಂದೆರಡು ಸಂಸ್ಥೆಗಳನ್ನು ಹೊರತುಪಡಿಸಿದರೆ ಈ ಕ್ಷೇತ್ರವನ್ನು ಪೊರೆಯುವ ಸಂಸ್ಥೆಗಳ ವಿಳಾಸಗಳೇ ಕಮ್ಮಿ. ಕನ್ನಡದಲ್ಲಿ ಒಂದು ಪುಸ್ತಕ ಪ್ರಕಟಿಸುವುದು ಈಗ ಸುಮಾರು ೨೫ ಸಾವಿರ ರೂಗಳ ಬಾಬತ್ತು. ಆದರೆ ಧ್ವನಿಮುದ್ರಿಕೆಗಳ ಕೆಲಸ ಅಷ್ಟು ಸುರಳೀತ ಅಲ್ಲ.  ಹೊಸಬರು ಮೀಟಿದ ಹೃದಯ ತಂತಿಗಳನ್ನು ಜನರಿಗೆ ತಲುಪಿಸುವುದಂತೂ ಸೆಳೆತಕ್ಕೆ ವಿರುದ್ಧವಾದ ನಡಿಗೆ. ಆದರೆ ಗೆಳೆಯರು ಪರಸ್ಪರ ಕೈಹಿಡಿದರೆ, ಒಂದು ಭಾವದ ಅಣೆಕಟ್ಟು ಸಾಧ್ಯ ಅನ್ನೋದಕ್ಕೆ ಉದಾಹರಣೆ ಈ ಅಂತರಾಳ’. ಸಾಗರ ಮತ್ತು ಬೆಂಗಳೂರಿನ ಒಂದಷ್ಟು ಜನ ಗೆಳೆಯರು ಹೆಗಲಿಗೆ ಹೆಗಲು ಕೊಟ್ಟು ಹೊರತಂದ ಭಾವಗೀತೆಗಳ ಈ ಸಿ.ಡಿ. ಅಂತರಾಳ. ಲಹರಿಇದರ ಮಾರ್ಕೆಟಿಂಗ್ ಹೊಣೆ ಹೊತ್ತುಕೊಂಡಿದೆ. ನಾದ ಸಮುದ್ರದಲ್ಲಿ ಸಾವಿರಾರು ಅಲೆಗಳು.
ಸಾಗರದಲ್ಲಿರುವ ಚಿನ್ಮಯ್ ಈ ಹಾಡುಗಳನ್ನು ರಚಿಸಿದ್ದರೆ, ಸಾಗರದಿಂದ ಬೆಂಗಳೂರಿನ ಜನಸಾಗರಕ್ಕೆ ಬಿದ್ದ ಯುವಕ ದೀಪಕ್ ಕೋರಡಿ ಸಂಗೀತ ನೀಡಿದ್ದಾರೆ. ದೀಪಕ್ ಮತ್ತು ಅವರ ಸಾಫ್ಟ್‌ವೇರ್ ಗೆಳೆಯರು ಈ ಭಾವಯಾನದಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಊರು-ಬೆಂಗಳೂರು-ಸಾಫ್ಟ್‌ವೇರುಈ ಮೂರರ ಮಧ್ಯೆ ಒಂದು ಸುಗಮ ಸೇತುವೆಯಾಗಿ ಈ ಧ್ವನಿಮುದ್ರಿಕೆ ರೂಪುಗೊಂಡಿರುವುದೇ ಸಂತೋಷದ ಸಂಗತಿ. ಕನ್ನಡವನ್ನು ಕಾಪಾಡುವ ಕಂದಮ್ಮಗಳು ಇನ್ನೂ ಇವೆ ಅನ್ನುವುದಕ್ಕೆ ಸಾಕ್ಷಿ.    
ಇಲ್ಲಿನ ೯ ಹಾಡುಗಳಲ್ಲಿ ಮೂರು ಹಾಡುಗಳನ್ನು ರಾಜೇಶ್‌ಕೃಷ್ಣನ್, ಎರಡು ಹಾಡುಗಳನ್ನು ಅನುರಾಧ ಭಟ್, ಇನ್ನೆರಡನ್ನು ಚಿನ್ಮಯ್, ಮತ್ತೆರಡು ಹಾಡುಗಳನ್ನು ಚೇತನ್ ಸೋಸ್ಕ ಹಾಡಿದ್ದಾರೆ. ಇವೆಲ್ಲವುಗಳಲ್ಲಿ ಒಂದೇ ಹೆಣ್ಣು ದನಿಯಾದ್ದರಿಂದಲೋ ಏನೋ, ಅನುರಾಧಾ ಭಟ್ ಅವರು ಹಾಡಿದ ಎರಡೂ ಹಾಡುಗಳು ಗುಂಗಾಗಿ ಕಾಡುತ್ತವೆ ! ಜಂಟೀ ಖಾತೆಗೆ ಈಗಲೇ ಕೂಡಿಕೊ’, ’ತೇಲೀ ನಿನ್ನ ಅಂಗೈಯಲ್ಲಿ ಜೋಲಿ ಹಾಡಿಸೂ’, ’ನಿನ್ನ ರಾಗಕಿದು ನನ್ನ ಹಾಡು / ನನ್ನ ಪದಗಳ ನೀನು ಹಾಡು / ತೇಲಿ ಸಾಗುವ ಭಾವದೂರಿಗೆ ನಮ್ಮದಾಗಲಿ ಈ ಘಳಿಗೆ’ - ಎಂಬ ಸಾಲುಗಳಲ್ಲಿ ಹೊಸರುಚಿ ಇದೆ.
ಆದರೆ ಕನಸು-ನನಸು, ಭಾವ-ಜೀವ, ಬಿಂಬ-ಪ್ರತಿಬಿಂಬ, ಅಲೆ-ಸೆಲೆ, ಮರೆವು-ನೆನಪು ಇಂತಹ ಬಹೂಪಯೋಗಿ ಪದಗಳ ಪುನರಾವರ್ತನೆಯನ್ನು ತಪ್ಪಿಸಬಹುದಿತ್ತು. ಜತೆಗೆ ಗಂಡು-ಹೆಣ್ಣಿನ ಸಂಬಂಧದ ನಾನು-ನೀನುಹಾಡುಗಳನ್ನು ಮೀರಿದವೂ ಇದ್ದರೆ ಇದು ಮತ್ತಷ್ಟು ಸಮೃದ್ಧವಾಗುತ್ತಿತ್ತು. ಹಾಡಿನ ಸಾಹಿತ್ಯ ಏನೇ ಇದ್ದರೂ ಅದನ್ನು ಮರೆಸಿ, ಜನರಿಗೆ ಇಷ್ಟವಾಗುವ ಹಾಗೆ ಸಂಯೋಜನೆಗೊಳ್ಳುವ ಸಂಗೀತದ್ದು ಒಂದು ತೆರನಾದರೆ, ಒಳ್ಳೆಯ ಸಾಹಿತ್ಯ ಮತ್ತಷ್ಟು ಮನಸ್ಸಿಗೆ ನಾಟುವ ಹಾಗೆ ಸಂಗೀತ ಸಂಯೋಜಿಸುವುದು ಇನ್ನೊಂದು. ಹಾಡಿಗೆ ತಕ್ಕ ರಾಗ ಹೇಗೋ, ತಕ್ಕುದಾದ ತಾಳವೂ ಬೇಕಲ್ಲ. ಬಹುಶಃ ದೀಪಕ್‌ರದ್ದು ಇದು ಮೊದಲ ಸಂಗೀತ ಸಂಯೋಜನೆಯ ಧ್ವನಿಮುದ್ರಿಕೆ. ಅವರ ಸೀಮಿತ ಅನುಭವ-ಅನುಕೂಲಗಳಲ್ಲಿ, ಪದ-ಭಾವ ಕೆಡದಂತೆ ಸಂಗೀತ ಸಂಯೋಜಿಸುವಲ್ಲಿ ಅವರು ಯಶ ಸಾಧಿಸಿದ್ದಾರೆ. 
ಕನ್ನಡದ ಕಲುಷಿತ ಸಿನಿಮಾ ಹಾಡುಗಳು, ರಿಮೇಕ್ ಹಾಡುಗಳು, ಕನ್ನಡ ಪದಗಳ ಅರಿವೇ ಇಲ್ಲದ ಪರಸ್ಥಳದ ಗಾಯಕರು - ಇಂತಹ ಅಸಂಬದ್ಧದ ನಡುವೆ ಈ ಪ್ರಾಮಾಣಿಕ ಪ್ರಯತ್ನ ಹಾಯೆನಿಸುತ್ತದೆ. ಒಂದು ಶುದ್ಧ ಮನಸ್ಸು ಈ ಧ್ವನಿಮುದ್ರಿಕೆಯಲ್ಲಿ ತುಂಬಿಕೊಂಡಿರುವುದು ಆನಂದದಾಯಕವಾಗಿದೆ.   
- ಸುಧನ್ವಾ ದೇರಾಜೆ
ಲೇಖಕ, ಜೀ ಕನ್ನಡ ಉದ್ಯೋಗಿ